ವಿಲ್‍ಸ್ಟೆಟರ್, ರಿಚರ್ಡ್
	1842-1942. ಜರ್ಮನ್ ರಸಾಯನ ವಿe್ಞÁನಿ, ಸಸ್ಯರಂಗುಗಳು ಈತನ ಸಂಶೋಧನ ಕ್ಷೇತ್ರ. ಮ್ಯೂನಿಚ್ ವಿಶ್ವವಿದ್ಯಾಲಯದಿಂದ ಡಾಕ್ಟೊರೇಟ್ ಪದವಿ ಪಡೆದು (1894) ಸ್ವಿಟ್ಜರ್‍ಲೆಂಡ್‍ನ ಜ್ಯೂರಿಚ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದ (1905). ಸಸ್ಯಜನ್ಯ ವರ್ಣದ್ರವ್ಯಗಳನ್ನು ಕುರಿತ ಸಂಶೋಧನೆಯನ್ನು ಕೈಗೆತ್ತಿಕೊಂಡ. ಪತ್ರಹರಿತ್ತು (ಕ್ಲೋರೋಫಿಲ್)-ಜೀವನಾಧಾರವಾದ ಆಕ್ಸಿಜನ್‍ನ ನಿರಂತರ ಸರಬರಾಜಿನಲ್ಲಿ ತೊಡಗಿರುವ ಪದಾರ್ಥವಿದು. ಈ ವರ್ಣದ್ರವ್ಯಗಳದೇ ಒಂದು ವಿಶಿಷ್ಟ ಗುಂಪು. ಮತ್ತೆ, ಒಂದರಿಂದ ಇನ್ನೊಂದನ್ನು ಬೇರ್ಪಡಿಸ ಲಾಗದಷ್ಟು ಶ್ರಮದಾಯಕ. ಸವಾಲುಗಳನ್ನು ಎದುರಿಸುವ ಜಾಯಮಾನದವನಾದ ವಿಲ್‍ಸ್ಟೆಟರ್ ಈ ಸಂಶೋಧನ ಕ್ಷೇತ್ರಕ್ಕೆ ಆಕರ್ಷಿತನಾದದ್ದು ಸಹಜವೇ. 1906ರಲ್ಲಿ ಸ್ಟೆಟ್ ಎಂಬಾತ ವರ್ಣರೇಖನ ತಂತ್ರವನ್ನು (ಕ್ರೊಮಟೋಗ್ರಫಿ) ನಿರೂಪಿಸಿದುದು ಇವನಿಗೆ ಅನುಕೂಲವಾಯಿತು. ಅಲ್ಯೂಮಿನ (ಂಟ2ಔ3) ಪುಡಿಗೆ ಅಧಿಶೋಷಣ ಗುಣವಿದೆ. ಅದನ್ನು ನೀಳಗಾಜಿನ ನಾಳದಲ್ಲಿ ತುಂಬಿ, ಅದರ ಮೂಲಕ ವರ್ಣದ್ರವ್ಯ ಮಿಶ್ರಣವುಳ್ಳ ದ್ರಾವಣವನ್ನು ಜಿನುಗಲು ಬಿಟ್ಟಾಗ ಅಲ್ಯೂಮಿನ ಅದನ್ನು ಯಾವುದೊ ಕ್ರಮದಲ್ಲಿ ಹೀರಿ, ವರ್ಣದ್ರವ್ಯಗಳ ಪಟ್ಟೆಗಳನ್ನು ನಿರ್ಮಿಸುತ್ತದೆ. ಬೇರೆ ಬೇರೆ ಬಣ್ಣಗಳು ಒಂದರ ಕೆಳಗೊಂದು ಹಂತಹಂತವಾಗಿ ಸಂಗ್ರಹವಾಗುತ್ತವೆ. ಅನಂತರ ಅವನ್ನು ಯುಕ್ತ ದ್ರಾವಕದಿಂದ ತೊಳೆದು ಪಡೆಯಬಹುದು. ಇದು ವರ್ಣರೇಖನದ ತತ್ತ್ವ. ಈ ಆಂಶಿಕ ಅಧಿಶೋಷಣ ತತ್ತ್ವವನ್ನು ಈತ ಬಳಸಿ ಸಸ್ಯಜನ್ಯ ಬಣ್ಣಗಳನ್ನು ಯಶಸ್ವಿಯಾಗಿ ಬೇರ್ಪಡಿಸಿ ಹೀಗೆ ಪಡೆದ ಪತ್ರಹರಿತ್ತಿನ ರಚನಾವಿನ್ಯಾಸವನ್ನು ಶೋಧಿಸಿದ. ಕ್ಲೋರೋಫಿಲ್ ಸಸ್ಯಜನ್ಯ ವರ್ಣದ್ರವ್ಯ. ರಕ್ತದಲ್ಲಿರುವ ಹಿಮೋಗ್ಲೋಬಿನ್ನಾದರೋ ಪ್ರಾಣಿಮೂಲದ್ದು. ಇದರಲ್ಲಿ ಹೀಮ್ ಎಂಬ ಕೆಂಪು ವರ್ಣದ್ರವ್ಯವಿದೆ. ಎರಡೂ ವರ್ಣದ್ರವ್ಯಗಳ ಅಣುರಚನೆ ಏಕರೀತಿ. ಪರಸ್ಪರ ಬಂಧಿತವಾಗಿರುವ ನಾಲ್ಕು ಪಿರೋಲ್ ಉಂಗುರಗಳ ಹಂದರದ ಕೇಂದ್ರದಲ್ಲಿ ಲೋಹದ ಪರಮಾಣುವಿದೆ. ಪತ್ರಹರಿತ್ತಿನಲ್ಲಿ ಮ್ಯಾಗ್ನೀಸಿಯಮ್ ಅಯಾನಿದೆ. ಹೀಮ್‍ನಲ್ಲಿರುವುದು ಫೆರಸ್ ಅಯಾನ್, ಸಸ್ಯಜನ್ಯ ವರ್ಣದ್ರವ್ಯಗಳನ್ನು ಕುರಿತ ಅಪೂರ್ವ ಸಂಶೋಧನೆಗಾಗಿ ಈತ 1915ರಲ್ಲಿ ನೊಬೆಲ್ ಪಾರಿತೋಷಿಕ ಪಡೆದ. ಜರ್ಮನಿಗೆ ಹಿಂತಿರುಗಿ ಮಿತ್ರ ಫ್ರಿಟ್ಝ್ ಹಾಬೆರ್ (1868-1934) ಜೊತೆಗೂಡಿ, ಯುದ್ಧದಲ್ಲಿ ವಿಷವಾಯುಗಳ ವಿರುದ್ಧ ಸೈನಿಕರು ಬಳಸಬಹುದಾದ ಅನಿಲ ಮುಖವಾಡಗಳನ್ನು ತಯಾರಿಸಿದ. ಸರ್ವಾಧಿಕಾರಿ ಹಿಟ್ಲರನ ಯಹೂದ್ಯವಿರೋಧೀ ಕಾರ್ಯಾಚರಣೆಯಿಂದ ನೊಂದು ಜೀವ ಉಳಿಸಿ ಕೊಳ್ಳಲು ಸ್ವಿಟ್ಜರ್‍ಲೆಂಡಿಗೆ ಹೋದ ಈತ ಅಲ್ಲೇ ಶೇಷಾಯುಷ್ಯವನ್ನು ಕಳೆದ.			
		(ಎಚ್.ಜಿ.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ